ಮಿಲ್ಖಾಸಿಂಗ್
1935. ಫ್ಲೈಯಿಂಗ್ ಸಿಖ್ ಎಂದು ಖ್ಯಾತರಾಗಿದ್ದ ಕ್ರೀಡಾಪಟು; ಓಟಗಾರ. ಈಗ ಪಾಕಿಸ್ತಾನದಲ್ಲಿರುವ ಲೈಯಾಲ್‍ಪುರಜಿಲ್ಲೆಯ ಗೋವಿಂದಪುರ ಎಂಬ ಹಳ್ಳಿಯ ಒಂದು ಬಡಕುಟುಂಬದಲ್ಲಿ 8-10-19354ರಂದು ಜನಿಸಿದರು. ವರ್ಷ ಪ್ರಾಯ. ಕೆಲಕಾಲ ಕಷ್ಟದ ಜೀವನವನ್ನು ನಡೆಸಿದರು. ಇವರ ಅಣ್ಣ ಮಖನ್‍ಸಿಂಗ್ ಭಾರತ ಸೈನ್ಯದಲ್ಲಿದ್ದರಾಗಿ ಅವರ ಪ್ರಯತ್ನದಿಂದ ಮಿಲ್ಖಾಸಿಂಗ್ ಅವರಿಗೆ ಸೈನ್ಯದಲ್ಲಿ ಕೆಲಸ ದೊರೆಯಿತು (1953). ಓಟ ಸ್ಪರ್ಧೆಯ ಬಗ್ಗೆ ಚಿಕ್ಕಂದಿನಿಂಲೂ ಅಪಾರ ಒಲವಿದ್ದುದರಿಂದ ಅದರ ಅಭ್ಯಾಸದಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ಇವರು ಅನೇಕ ರಾಷ್ಟ್ರೀಯ ಅಂತರರಾಷ್ಟ್ರೀಯ ಓಟ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. 1957ರಲ್ಲಿ ನಡೆದ ಪ್ರಥಮ ಅಖಿಲ ಭಾರತ ಓಟಸ್ಪರ್ಧೆಯಲ್ಲಿ 200ಮೀಟರ್ ದೂರವನ್ನು 21,5 ಸೆಕೆಂಡುಗಳಲ್ಲಿಯೂ 400 ಮೀಟರ್ ದೂರವನ್ನು 47.2 ಸೆಕೆಂಡುಗಳಲ್ಲಿಯೂ ಕ್ರಮಿಸಿ ದಾಖಲೆ ನಿರ್ಮಿಸಿದರು. 1958ರ ಅಖಿಲಭಾರತ ಓಟ ಸ್ಪರ್ಧೆಯಲ್ಲಿ 200 ಮೀಟರ್ ದೂರವನ್ನು 21.2 ಸೆಕೆಂಡುಗಳಲ್ಲಿ ಓಡಿ ತಮ್ಮ ಹಿಂದಿನ ದಾಖಲೆಯನ್ನು ಉತ್ತಮ ಪಡಿಸಿದರು. ಅದೇ ವರ್ಷ ಟೋಕಿಯೋದಲ್ಲಿ ನಡೆದ ಏಷ್ಯ ರಾಷ್ಟ್ರಗಳ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ 400 ಮೀಟರ್ ದೂರವನ್ನು 46.6 ಸೆಕೆಂಡುಗಳಲ್ಲಿ ಕ್ರಮಿಸಿ ಚಿನ್ನದ ಪದಕಗಳಿಸಿದರು. ಅದೇ ವರ್ಷಕಾರ್ಡಿಫ್ ವಿಲ್ಸ್‍ನಲ್ಲಿ ನಡೆದ ಬ್ರಿಟಿಷ್ ಸಾಮ್ರಾಜ್ಯ ಮತ್ತು ಕಾಮನ್‍ವೆಲ್ತ್ ಕ್ರೀಡೆಗಳಲ್ಲಿ ಭಾಗವಹಿಸಿ ಚಿನ್ನದಪದಕ ಪಡೆದರು. 1960ರಲ್ಲಿ ರೋಮ್‍ನಲ್ಲಿ ನಡೆದ ಒಲಿಂಪಿಕ್ ಸ್ಪರ್ಧೆಯಲ್ಲಿ ಭಾಗವಹಿಸಿ ಸುಲಭವಾಗಿ ಸೆಮಿಫೈನಲ್ ತಲುಪಿದರಾದರೂ ಫೈನಲ್‍ನಲ್ಲಿ ನಾಲ್ಕನೆಯ ಸ್ಥಾನ ಪಡೆದರು. 1962ರಲ್ಲಿ ಜಕಾರ್ತದಲ್ಲಿ ನಡೆದ ಏಷ್ಯನ್ ಕ್ರೀಡೆಗಳಲ್ಲಿಯೂ ಇವರು ಭಾಗವಹಿಸಿದ್ದರು. 100 ಮೀಟರ್ ದೂರವನ್ನು 10.4 ಸೆಕೆಂಡುಗಳಲ್ಲೂ 200 ಮೀಟರ್ ದೂರವನ್ನು 20.7 ಸೆಕೆಂಡುಗಳಲ್ಲೂ 400 ಮೀಟರ್ ದೂರವನ್ನು 45.6 ಸೆಕೆಂಡುಗಳಲ್ಲೂ ಓಡಿರುವುದು ಮಿಲ್ಖಾಸಿಂಗ್ ಅವರ ದಾಖಲೆಯಾಗಿದೆ. ಪ್ರಸಿದ್ಧ ವಾಲಿಬಾಲ್ ಆಟಗಾರ್ತಿ ನಿರ್ಮಲಾ ಸಾಹನಿ ಮಿಲ್ಖಾಸಿಂಗ್ ಅವರ ಪತ್ನಿ. ಇವರಿಗೆ ಒಂದು ಗಂಡು, ಮೂವರು ಹೆಣ್ಣುಮಕ್ಕಳಿದ್ದಾರೆ. ಸಿಂಗ್ ಸದ್ಯದಲ್ಲಿ ಪಂಜಾಬಿನ ಅಥ್ಲೆಟಿಕ್ ಟ್ರೈನಿಂಗ್ ಸೆಂಟರ್‍ನ ನಿರ್ದೇಶಕರಾಗಿದ್ದಾರೆ. ಭಾರತ ಸರ್ಕಾರ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ (1958). ಪ್ರಪಂಚದ ಅತ್ಯಂತ ಶ್ರೇಷ್ಠ. ಕ್ರೀಡಾಪಟು ಎಂಬ ಹೆಲ್‍ಮ್ಸ್ ಪ್ರಶಸ್ತಿ ಕೂಡ ಇವರಿಗೆ ದೊರೆತಿದೆ (1959).
(ಎಸ್.ಎಚ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ